ದಾವಣಿ ಧರಿಸಿ ಮಲ್ಲಿಗೆ ಮುಡಿದು ನಡೆದು ಬಂದ ನಿನ್ನ ಅಂದ,
ಪದೇ ಪದೇ ನೆರಿಗೆಯ ಮೇಲೆ ಕೈಯಾಡುವ ನಿನ್ನ ಬೆರಳುಗಳ ಚಂದ,
ಆಳಕ್ಕೆ ಜಾರಿ ಬಿದ್ದ ಜೋಗದಂತೆ ನಿನ್ನ ಜಡೆ,
ದಾಳಿಂಬೆ ಬೀಜದಂತೆ ಜೋಡಿಸಿಟ್ಟ ಹಲ್ಲುಗಳು,
ಅರಳಿದ ಕೆಂಪು ಗುಲಾಬಿ ಪಕಳೆಯಂತ ನಿನ್ನ ಅಧರಗಳು,
ಮುಂಜಾನೆಯಲಿ ರಂಗೇರಿದ ಮೂಡಣದಂತೆ ನಿನ್ನ ಮೈಬಣ್ಣ,
ನಡೆವಾಗ ಆಗುಂಬೆಯ ಮೇಲಿಂದ ಹರಿದು ಬಂದ ತಿಳಿ ನೀರ ಜರಿ,
ಕೊಡಚಾದ್ರಿಯ ತಂಗಾಳಿಯಂತೆ ನಿನ್ನ ಸ್ಪರ್ಶ,
ನಿನ್ನ ಸಾಗರದಂತ ಕಂಗಳಲಿ ಸಾವಿರ ಕನಸುಗಳ ಹಾಯಿದೋಣಿ,
ಮಾಘ ಮಾಸದ ಗಾಳಿಗೆ ಪಟಪಟ ಹಾರಿದೆ ನಿನ್ನ ದಾವಣಿ,
ನಕ್ಕಾಗ ಅಂಬರಕ್ಕೆ ಮುತ್ತಿಟ್ಟ ಮಿನುಗೋ ತಾರೆಗಳು,
ಮನಸಿನ ಸರೋವರದಲ್ಲಿ ಕಲ್ಲೆಸೆದು ಅಲೆಯೆಬ್ಬಿಸಿದ ನಿನ್ನ ಮಾತುಗಳು,
ಉಸಿರಿನ ಸಂಗೀತದ ಜೊತೆಗೆ ನೀ ಹಾಡಿದ ಮೌನರಾಗದ ಸಾಲುಗಳು,
ನಿನ್ನೆಲ್ಲ ಸೌಂದರ್ಯವನ್ನು ಕಣ್ತುಂಬಿಕೊಂಡ ನನ್ನ ಹೃದಯ,
ವಸಂತ ಮಾಸದಲ್ಲಿ ಹಿತವಾಗಿ ಚಲಿಸುವ ಬೆಳ್ಳಿ ಮೋಡ,
ಇಂತಿ ನಿನ್ನ ಪ್ರೀತಿಯ...
ಕಂಪನ
No comments:
Post a Comment